Tuesday, November 3, 2009

ಆಡಳಿತವನ್ನೇ ಗುಜರಾತಿಗೆ ಹೊರಗುತ್ತಿಗೆ ನೀಡಿ

ನಾರಾಯಣ ನಾರಾಯಣ!
ಕೊನೆಗೂ ಕರ್ನಾಟಕದಲ್ಲಿ ವಿರೋಧ ಪಕ್ಷವೊಂದು ಕಾಣಿಸಿಕೊಂಡಿದೆ. ಅದೇ ಬಿಜೆಪಿ!
ಕಥೆ ಇಷ್ಟೇ:
ಪಕ್ಷದಲ್ಲಿ ಮೂಲ ಬಿಜೆಪಿಗರು ಹಲವರಿದ್ದಾರೆ. ಉದಾ: ಕರುಣಾಕರ ರೆಡ್ಡಿ, ಜನಾರ್ಧನ ರೆಡ್ಡಿ, ಶ್ರೀರಾಮುಲು. ಇವರೆಲ್ರೂ ನೇರವಾಗಿ ಬಿಜೆಪಿಗೇ ಸೇರಿದವರು. ಮೂಲತಃ ಮಣ್ಣಿನ ಮಕ್ಕಳಾದ ಇವರು ಕಷ್ಟದಿಂದ ಮೇಲೆ ಬಂದವರು. ಬಂಡೆ ಒಡೆಯುವುದೇ ಇವರ ಕಾಯಕ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಇವರೇ ಕಾರಣ ಅಂತಾರೆ ಜನ.
ದುರಾದೃಷ್ಟ ಅಂದ್ರೆ ರಾಜ್ಯದ ಅಧಿಕಾರದ ಚುಕ್ಕಾಣಿ ಇರೋದು ಜನಸಂಘ ಮೊದಲಾದ ಪಕ್ಷಗಳಿಂದ ವಲಸೆ ಬಂದ ಕೆಲವರ, ಇತರ ಸಂಘಟನೆಗಳಿಂದ ಬಂದ ಜನರ ಕೈಲಿ. ಈ ಜನ ಆ ಬಂಡೆ ಒಡಿಯೋರ ಕೆಲಸಕ್ಕೆ ತೊಂದರೆ ಕೊಡ್ತಾನೇ ಬಂದಿದ್ದಾರೆ.
ಬಂಡೆ ಒಡಿಯೋ ಜನರ ದೇಹ ಗಟ್ಟಿಮುಟ್ಟಾಗಿರುತ್ತೆ. ಆದ್ರೆ ನಮ್ ಆಡಳಿತ ಮಾಡೋ ಜನಕ್ಕೆ ಸ್ವಲ್ಪ ಶಕ್ತಿ ಬೇಕಲ್ವಾ? ಅದಕ್ಕೇ ಮೊನ್ನೆ ಮೊನ್ನೆ ಸುತ್ತೂರು ಮಠದಲ್ಲಿ ಎಲ್ರಿಗೂ ಯೋಗಾಸನ ಮಾಡಿಸಲಾಯ್ತು. ಎಲ್ಲಾ ಮಂತ್ರಿಗಳಿಗೂ ತುಂಬ ಶಕ್ತಿ ಬಂತು. ಮೋದಿ ಹಾಸ್ಪಿಟಲಿಂದ ಡಾಕ್ಟ್ರೂ ಬಂದ್ರು. ಕೊನೆಗೂ ಸರಕಾರ ದಷ್ಟ ಪುಷ್ಟ, ಆರೋಗ್ಯವಂತವಾಯ್ತು.
ಅದ್ರಿಂದಾಗಿಯೇ ಇರಬಹುದು. ಬಳ್ಳಾರಿಯನ್ನು ಆಳುತ್ತಿದ್ದ ಮೂಲ ಬಿಜೆಪಿಯ ಮಂತ್ರಿಗಳಿಗೆ ತಮ್ಮ ಹೊಸ ಶಕ್ತಿ ಸಂಪೂರ್ಣ ರಾಜ್ಯವನ್ನಾಳಲು ಸಾಕು ಎಂಬ ಭಾವನೆ ತಂದಿತು. ಆಗ ಬಂತು ಪ್ರವಾಹ. ಪರಿಹಾರ ಮಾಡ್ಬೇಕು ಎಂಬ ಅತಿಯಾದ ಉತ್ಸಾಹ ಎರಡೂ ಬಣಕ್ಕೂ. ಹೌದು, ಪ್ರವಾಹದಲ್ಲಿ ಎರಡು ಬಣಗಳು ಸೃಷ್ಟಿಯಾಗಿ ಆಗಿತ್ತು. ನಾವೇ ಪರಿಹಾರ ಮಾಡ್ತೇವೆ. ನೀವು ಸುಮ್ಕಿರಿ ಅಂತ ವಲಸಿಗರ ಗುಂಪು; ಇಲ್ಲ, ನಮಗೇ ಹೆಚ್ಚು ಶಕ್ತಿ ಇದೆ. ನಾವೇ ಪರಿಹಾರ ಮಾಡ್ತೇವೆ ಅಂತ ಮೂಲ ಬಿಜೆಪಿಗರು. ನೆರೆ ಪರಿಹಾರದ ಬಗ್ಗೆ ಅತಿಯಾದ ಕಾಳಜಿ ಮಿತ್ರ ಪಕ್ಷಗಳ ನಿದ್ದೆಗೆಡಿಸಿತು. ಇದು ಸಮ್ಮಿಶ್ರ ಸರಕಾರವಲ್ಲದಿದ್ರೂ ಬಿಜೆಪಿಯು ಜೆಡಿಎಸ್, ಕಾಂಗ್ರೆಸ್ ಮುಂತಾದ ಮಿತ್ರಪಕ್ಷಗಳನ್ನು ಹೊಂದಿರುವುದು ವಿಶೇಷ.
ಮಿತ್ರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ತುಂಬಾ ಬೇಸರ. ಒಳ್ಳೆದಾಗ್ಲಿ ಅಂತ ಆಶಿಸಿದ್ರು. "ಛೆ, ಹೀಗಾಗ ಬಾರ್ದಿತ್ತು, ಎಲ್ಲಾ ತಣ್ಣಗಾಗುತ್ತೆ" ಅಂತಂದ್ರು.

---
ಹೀಗೆಲ್ಲ ಆಗ್ತಾ ಇದ್ರೆ ನಂಗನಿಸಿದ್ದು: ಇವರಿಗೆ ಆಡಳಿತ ಮಾಡೋದಿಕ್ಕಾಗಲ್ಲ ಅಂದ್ರೆ ಅದನ್ನು ಗುಜರಾತಿಗೆ ಹೊರಗುತ್ತಿಗೆ (out source) ನೀಡ ಬಹುದಲ್ವಾ? ಅವರು ಅಲ್ಲಿಂದಾದ್ರೂ ಖಂಡಿತಾ ಸ್ವಲ್ಪ ಚೆನ್ನಾಗೇ ನಡೆಸ್ಬಹುದಲ್ವಾ?

No comments: