Sunday, November 8, 2009

ಜನರೇ ಕಾರಣ -ರಾಜಕಾರಣಿಗಳ ಮೇಲೊಂದು ಅನುಕಂಪದ ನೋಟ

ನಾರಾಯಣ ನಾರಾಯಣ!
ಹಲವು ದಿನಗಳಿಂದ ನೋಡ್ತಾ ಇದ್ದೇನೆ. ಮುಖ ನೋಡಲ್ಲ ಅಂತಾರೆ, ಮತ್ತೆ ಅಣ್ಣ ತಮ್ಮ ಅಂತಾರೆ, ಎಲ್ಲದ್ರ ಜೊತೆ ರಾಜ್ಯದ ಹಿತಕ್ಕಾಗಿ ಅಂತಾನೇ ಇರ್ತಾರೆ. ನಿಮಗೆಲ್ಲಾ ಗೊತ್ತಿರೋ ರೀತಿ ಅವರೇ ನಿಮ್ಮ ರಾಜಕಾರಣಿಗಳು.

ಮನೆ ಕಟ್ಟಿಸುತ್ತೆ, ಪರಿಹಾರ ಕೊಡುತ್ತೆ ಅಂತ ಕಾಯ್ತಿರೋ ಉತ್ತರ ಕರ್ನಾಟಕದ ಸಂತ್ರಸ್ತ ಜನ ಕೂಡಾ ಸರಕಾರದ ಮೇಲೆ ಭರವಸೆಯಿಂದ ಕಾಯ್ತಾ ಇದಾರೆ. ಎಲ್ಲಾ ಜನ ರಾಜಕಾರಣಿಗಳನ್ನ ಬೈತ್ತಾ ಇದಾರೆ. ನಾರಾಯಣ ನಾರಾಯಣ!

ಪ್ರೀತಿಯ ಜನರೇ,
ನಿಮ್ಮ ಪರಿಸ್ಥಿತಿ, ಅಸಹಾಯಕತೆ ನಂಗೆ ಅರ್ಥ ಆಗುತ್ತೆ. ಆದ್ರೆ ನಿಮ್ಮದೇನೂ ತಪ್ಪಿಲ್ಲ, ರಾಜಕಾರಣಿಗಳೇ ದುಷ್ಟರು ಅಂತ ನಿಮ್ಮ ಪರ ನಿಲ್ಲೋ ಸ್ಥಿತಿಯಲ್ಲಿ ನಾನಿಲ್ಲ. ಯಾಕಂದ್ರೆ ನಿಮಗಿಂತ ಜಾಸ್ತಿ ಅನುಕಂಪ ನಂಗೆ ನಾಯಕರ ಮೇಲಿದೆ. ಅವರನ್ನ ಬೈಯೋದು ನಿಮ್ಮ ಮನಸ್ಸಿನ ಭಾರ ಕ್ಡಿಮೆಯಾಗಿಸಬಹುದು, ಮಾಧ್ಯಮಗಳಿಗೆ ಅದು ಉದ್ಯೋಗವಾಗಿರಬಹುದು. ಆದ್ರೆ ಬರೀ ಸುತ್ತಾಡ್ತಿರೋ ನನ್ನಂತೋರಿಗೆ ಮಾತ್ರ ಅವರನ್ನ ನೋಡಿದ್ರೆ ಮರುಕ ಬರುತ್ತೆ.
ಅಂಥವರಿಗೆ ಯಾಕೆ ಓಟು ಹಾಕಿದ್ರಿ ಅಂತ ನಾನು ಕೇಳ್ತೀನೆ ಅಂತ ನಿಮಗೂ ಗೊತ್ತು. ಬರೀ ರೌಡಿಗಳೇ ಓಟಿಗೆ ನಿಂತ್ರೆ ಇನ್ನೇನ್ ಮಾಡ್ಲಿ ಅಂತ ತಾನೇ ನಿಮ್ಮ ಉತ್ತರ? ತಡೀರಿ. ಇದೇ ಬಳ್ಳಾರಿ ಹೇಗಿತ್ತು ನೆನಪು ಮಾಡ್ಕೊಳ್ಳಿ. ಆಗ ಬಿಜೆಪಿ ನಿಜವಾಗಿಯೂ ಹಣದ ಹಿಂದೆ ಬಿದ್ದಿರ್ಲಿಲ್ಲ. ಆದ್ರೆ ಬಳ್ಳಾರಿಯಲ್ಲಿ ಅಷ್ಟಿಟ್ಟು ಹಣ ಹಂಚಿ, ಬಡವರನ್ನ ಓಲೈಸಿ ಗೆಲ್ಲೋ ಕಾಂಗ್ರೆಸ್ ಮೆರಿತಾ ಇತ್ತು. ಆವತ್ತು ಬಿಜೆಪಿಗೆ ಓಟು ಹಾಕೋಣ ಅಂತ ನಿಮಗೇನಾದ್ರೂ ಅನ್ನಿಸ್ತಿತ್ತಾ? ಆವಾಗ ಬಿಜೆಪಿಯನ್ನು ಗೆಲ್ಲಿಸದ ನೀವು ಈಗೇಕೆ ಬಿಜೆಪಿಗೆ ಮುಗಿಬಿದ್ದು ಓಟು ಹಾಕ್ತೀರ? ಸುಷ್ಮಾರನ್ನು ಗೆಲ್ಲಿಸೊದಿಕ್ಕಾಗಿ ರಾಜಕೀಯ ಕಲಿತ ಜನ ಬಳ್ಳಾರಿ ರಾಜಕಾರಣವನ್ನು ಹೇಗೆ ತಿರುಗಿಸಿದ್ರು ನಿಮಗೆ ಗೊತ್ತು ತಾನೆ?
ಹಣ, ಅವ್ಯವಹಾರ, ಹೊಲಸು ರಾಜಕೀಯ, ಭ್ರಷ್ಟಾಚಾರ, ನಾಟಕ ಅಂತೆಲ್ಲ ನೀವೇನನ್ನ ಕರೀತೀರೋ, ಎಲ್ಲಾ ಬಿಡೋಕೆ ರೆಡ್ಡಿಗಳು ಸಿದ್ಧರಿದಾರೆ. ಅವರನ್ನ ಗೆಲ್ಲಿಸೋಕೆ ನೀವು ರೆಡೀನಾ? ಹೌದು ಅಂತೀರ, ಆದ್ರೆ ನೀವು ಹಾಗೆ ಮಾಡಲ್ಲ ಅಂತ ನಂಗೊತ್ತು. ಅಲ್ಲಿಂದ್ಲೇ ಶುರು.
ಇದೇ ಯಡಿಯೂರಪ್ಪ, ಅನಂತು ಎಲ್ಲ ಸೇರಿ ಹಣ ಇಲ್ಲ, ಜನ ಬೆಂಬಲ ಇಲ್ಲ ಅಂತಿರೋ ಕಾಲದಲ್ಲಿ ಎಷ್ಟು ಕಷ್ಟ ಪಟ್ಟಿದ್ರು ಅಂತ ಗೊತ್ತಾ? ತಮ್ಮ ಉದ್ಯೋಗ, ವೈಯಕ್ತಿಕ ಜೀವನ, ನೆಮ್ಮದಿ ಎಲ್ಲಾ ಬಿಟ್ಟು ಬಂದವರು ಅಧಿಕಾರ ಬಂದ ಕಾರಣಕ್ಕಷ್ಟೇ ಬದಲಾದ್ರು ಅಂತೀರ? ಆ ಕಾಲದಲ್ಲಿ ಹಣ ಮಾಡ್ಬೇಕು ಅನ್ನೋದೇ ಉದ್ದೇಶ ಅಂತಿದ್ರೆ ಅಷ್ಟೆಲ್ಲಾ ಕಷ್ಟ ಬರ್ತಿದ್ರಾ?

Tuesday, November 3, 2009

ಆಡಳಿತವನ್ನೇ ಗುಜರಾತಿಗೆ ಹೊರಗುತ್ತಿಗೆ ನೀಡಿ

ನಾರಾಯಣ ನಾರಾಯಣ!
ಕೊನೆಗೂ ಕರ್ನಾಟಕದಲ್ಲಿ ವಿರೋಧ ಪಕ್ಷವೊಂದು ಕಾಣಿಸಿಕೊಂಡಿದೆ. ಅದೇ ಬಿಜೆಪಿ!
ಕಥೆ ಇಷ್ಟೇ:
ಪಕ್ಷದಲ್ಲಿ ಮೂಲ ಬಿಜೆಪಿಗರು ಹಲವರಿದ್ದಾರೆ. ಉದಾ: ಕರುಣಾಕರ ರೆಡ್ಡಿ, ಜನಾರ್ಧನ ರೆಡ್ಡಿ, ಶ್ರೀರಾಮುಲು. ಇವರೆಲ್ರೂ ನೇರವಾಗಿ ಬಿಜೆಪಿಗೇ ಸೇರಿದವರು. ಮೂಲತಃ ಮಣ್ಣಿನ ಮಕ್ಕಳಾದ ಇವರು ಕಷ್ಟದಿಂದ ಮೇಲೆ ಬಂದವರು. ಬಂಡೆ ಒಡೆಯುವುದೇ ಇವರ ಕಾಯಕ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಇವರೇ ಕಾರಣ ಅಂತಾರೆ ಜನ.
ದುರಾದೃಷ್ಟ ಅಂದ್ರೆ ರಾಜ್ಯದ ಅಧಿಕಾರದ ಚುಕ್ಕಾಣಿ ಇರೋದು ಜನಸಂಘ ಮೊದಲಾದ ಪಕ್ಷಗಳಿಂದ ವಲಸೆ ಬಂದ ಕೆಲವರ, ಇತರ ಸಂಘಟನೆಗಳಿಂದ ಬಂದ ಜನರ ಕೈಲಿ. ಈ ಜನ ಆ ಬಂಡೆ ಒಡಿಯೋರ ಕೆಲಸಕ್ಕೆ ತೊಂದರೆ ಕೊಡ್ತಾನೇ ಬಂದಿದ್ದಾರೆ.
ಬಂಡೆ ಒಡಿಯೋ ಜನರ ದೇಹ ಗಟ್ಟಿಮುಟ್ಟಾಗಿರುತ್ತೆ. ಆದ್ರೆ ನಮ್ ಆಡಳಿತ ಮಾಡೋ ಜನಕ್ಕೆ ಸ್ವಲ್ಪ ಶಕ್ತಿ ಬೇಕಲ್ವಾ? ಅದಕ್ಕೇ ಮೊನ್ನೆ ಮೊನ್ನೆ ಸುತ್ತೂರು ಮಠದಲ್ಲಿ ಎಲ್ರಿಗೂ ಯೋಗಾಸನ ಮಾಡಿಸಲಾಯ್ತು. ಎಲ್ಲಾ ಮಂತ್ರಿಗಳಿಗೂ ತುಂಬ ಶಕ್ತಿ ಬಂತು. ಮೋದಿ ಹಾಸ್ಪಿಟಲಿಂದ ಡಾಕ್ಟ್ರೂ ಬಂದ್ರು. ಕೊನೆಗೂ ಸರಕಾರ ದಷ್ಟ ಪುಷ್ಟ, ಆರೋಗ್ಯವಂತವಾಯ್ತು.
ಅದ್ರಿಂದಾಗಿಯೇ ಇರಬಹುದು. ಬಳ್ಳಾರಿಯನ್ನು ಆಳುತ್ತಿದ್ದ ಮೂಲ ಬಿಜೆಪಿಯ ಮಂತ್ರಿಗಳಿಗೆ ತಮ್ಮ ಹೊಸ ಶಕ್ತಿ ಸಂಪೂರ್ಣ ರಾಜ್ಯವನ್ನಾಳಲು ಸಾಕು ಎಂಬ ಭಾವನೆ ತಂದಿತು. ಆಗ ಬಂತು ಪ್ರವಾಹ. ಪರಿಹಾರ ಮಾಡ್ಬೇಕು ಎಂಬ ಅತಿಯಾದ ಉತ್ಸಾಹ ಎರಡೂ ಬಣಕ್ಕೂ. ಹೌದು, ಪ್ರವಾಹದಲ್ಲಿ ಎರಡು ಬಣಗಳು ಸೃಷ್ಟಿಯಾಗಿ ಆಗಿತ್ತು. ನಾವೇ ಪರಿಹಾರ ಮಾಡ್ತೇವೆ. ನೀವು ಸುಮ್ಕಿರಿ ಅಂತ ವಲಸಿಗರ ಗುಂಪು; ಇಲ್ಲ, ನಮಗೇ ಹೆಚ್ಚು ಶಕ್ತಿ ಇದೆ. ನಾವೇ ಪರಿಹಾರ ಮಾಡ್ತೇವೆ ಅಂತ ಮೂಲ ಬಿಜೆಪಿಗರು. ನೆರೆ ಪರಿಹಾರದ ಬಗ್ಗೆ ಅತಿಯಾದ ಕಾಳಜಿ ಮಿತ್ರ ಪಕ್ಷಗಳ ನಿದ್ದೆಗೆಡಿಸಿತು. ಇದು ಸಮ್ಮಿಶ್ರ ಸರಕಾರವಲ್ಲದಿದ್ರೂ ಬಿಜೆಪಿಯು ಜೆಡಿಎಸ್, ಕಾಂಗ್ರೆಸ್ ಮುಂತಾದ ಮಿತ್ರಪಕ್ಷಗಳನ್ನು ಹೊಂದಿರುವುದು ವಿಶೇಷ.
ಮಿತ್ರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ತುಂಬಾ ಬೇಸರ. ಒಳ್ಳೆದಾಗ್ಲಿ ಅಂತ ಆಶಿಸಿದ್ರು. "ಛೆ, ಹೀಗಾಗ ಬಾರ್ದಿತ್ತು, ಎಲ್ಲಾ ತಣ್ಣಗಾಗುತ್ತೆ" ಅಂತಂದ್ರು.

---
ಹೀಗೆಲ್ಲ ಆಗ್ತಾ ಇದ್ರೆ ನಂಗನಿಸಿದ್ದು: ಇವರಿಗೆ ಆಡಳಿತ ಮಾಡೋದಿಕ್ಕಾಗಲ್ಲ ಅಂದ್ರೆ ಅದನ್ನು ಗುಜರಾತಿಗೆ ಹೊರಗುತ್ತಿಗೆ (out source) ನೀಡ ಬಹುದಲ್ವಾ? ಅವರು ಅಲ್ಲಿಂದಾದ್ರೂ ಖಂಡಿತಾ ಸ್ವಲ್ಪ ಚೆನ್ನಾಗೇ ನಡೆಸ್ಬಹುದಲ್ವಾ?