Thursday, December 24, 2009

ನಾನು ರೇಣುಕಾಚಾರ್ಯ ಬಣದ ವಿರೋಧಿಯಲ್ಲ: ಸ್ಪಷ್ಟನೆ


ನಾರಾಯಣ ನಾರಾಯಣ!

ರೇಣುಕಾಚಾರ್ಯ ಬಣಕ್ಕೆ ನಾನು  ವಿರೋಧಿ ಎಂಬ ಮಾತು ರಾಜಕೀಯ ವಲಯದಲ್ಲೆಲ್ಲ ಹಬ್ಬಿಕೊಂಡಿರುವುದರಿಂದಲೇ ಹೀಗೊಂದು ಸ್ಪಷ್ಟನೆ ನೀಡಬೇಕಾಗಿದೆ. ಯಾವುದೇ ರಾಜಕೀಯ/ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುವುದು ಅಭ್ಯಾಸ. ನಾನೇನಾದ್ರು ಹೋಗದೇ ಇದ್ರೆ "ಸುತ್ತಾಡೋದು ಬಿಟ್ಟು ಬೇರೆ ಕೆಲ್ಸ ಇಲ್ಲ, ಆದ್ರೂ ನಂ ಕಾರ್ಯಕ್ರಮಕ್ಕೆ ಬರೋಕಾಗಲ್ವ" ಅಂತ ಜನ ಬೈತಾರೆ. ಹಾಗಾಗಿ ಎಲಾ ಕಡೆ ಹೋಗ್ತಾ ಇರ್ತೇನೆ.
ಆದ್ರೆ, ಮೊನ್ನೆ ರೇಣುಕಾಚಾರ್ಯ ಬಣದ ಎಲ್ಲಾ ಸಚಿವರೂ ಮಂತ್ರಿಗಳಾದ್ರೂ ನಾನು ಪ್ರಮಾಣವಚನ ಸಮಾರಂಭಕ್ಕೆ ಹೋಗಿರ್ಲಿಲ್ಲ.
 (ಮಾಜಿ/ಹಾಲಿ)ಸಚಿವರಾದ ರೇಣುಕಾಚಾರ್ಯ ನೇತೃತ್ವದ ಏಕ ಸದಸ್ಯ ಬಣವು ಬಿಜೆಪಿಯಲ್ಲಿನ ಹಲವಾರು ಬಣಗಳಲ್ಲೊಂದು. ಯಾವಾಗ ಸಚಿವರಾಗಿರುತ್ತಾರೆ, ಯಾವಾಗ ಮಾಜಿಯಾಗುತ್ತಾರೆಂಬುದು ರಾಜಕೀಯದಲ್ಲಿ ಹೇಳುವುದು ಅಷ್ಟೊಂದು ಸುಲಭವಲ್ಲದ ಕಾರಣ ನೀವು ಓದುವ ಸಂದರ್ಭದಲ್ಲಿನ ಸಮಯದಲ್ಲಿ ಸಚಿವರಾಗಿಲ್ಲದ ಸಾಧ್ಯತೆಯಿರುವುದರಿಂದ "ಮಾಜಿ" ಎಂಬುದನ್ನು ಜೊತೆಯಲ್ಲಿ ಸೇರಿಸಲಾಗಿದೆ.
ವಾಸ್ತವ ಇಷ್ಟೆ:
 ಬಿಜೆಪಿಯಲ್ಲಿ ಮಾತ್ರವಲ್ಲ, ಎಲ್ಲಾ ಪಕ್ಷಗಳಲ್ಲಿನ ಎಲ್ಲಾ ಬಣಗಳಲ್ಲಿನ ನಾಯಕರೂ ನನಗೆ ಆಪ್ತರೇ. ರೇಣುಕಾಚಾರ್ಯ ಬಣಕ್ಕೆ ಮಂತ್ರಿಗಿರಿ ನೀಡಿದ್ದನ್ನು ವಿರೋಧಿಸಿ ಬಿಜೆಪಿಯ ಅನೇಕ ಬಣಗಳಲ್ಲಿ ಅಪಸ್ವರ ಎದ್ದಿತ್ತು. ಆ ಬಣಗಳವರೂ ನನ್ನನ್ನ ಪ್ರಮಾಣ ವಚನ ವಿರೋಧೀ ಮಾತುಕತೆಗಳಿಗೆ ಆಮಂತ್ರಿಸಿರುವ ಕಾರಣ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ. ಜೊತೆಗೆ ರೇಣುಕಾಚಾರ್ಯ ವಿರೋಧಿಗಳ ಬಳಿಗೂ ನಾನು ಹೋಗಿಲ್ಲ. ಹಾಗೆಂದು ನಾನು ರೇಣುಕಾಚಾರ್ಯ ಬಣದ ಪರವೂ ಅಲ್ಲ.

 ಅದಿರ್ಲಿ,
ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋದವರು ಹೇಳಿದ್ದು:
ಈ ಇಂಥ ಮನುಷ್ಯರಿಗೂ ಅಧಿಕಾರ ಬೋಧಿಸ್ಬೇಕಾ? ನಂಗಾಗಲ್ಲ... ಅಂತ ರಾಜ್ಯಪಾಲರು ಮುಖ್ಯಮಂತ್ರಿಗಳನ್ನು ಕರೆದು ಹೇಳಿದ್ರಂತೆ. ಅವರನ್ನು ಸಮಾಧಾನ ಪಡಿಸಿದ ಮುಖ್ಯಮಂತ್ರಿಗಳು, ಈಗಾಗ್ಲೇ ಅವರ ರಾಜೀನಾಮೆ ಪತ್ರ ಕೇಳಿ ನನ್ನ ಜೋಬಲ್ಲಿಟ್ಟುಕೊಂಡಿದ್ದೇನೆ. ನೀವೇನೂ ಭಯ ಪಡೋ ಅಗತ್ಯ ಇಲ್ಲ, ನೀವ್ಯಾವಾಗ ಬೇಕಾದ್ರೂ ಕೇಳಿ, ಅವರ ರಾಜೀನಾಮೆಯನ್ನು ನಿಮಗೆ ನೀಡ್ತೇನೆ ಅಂತ ಮುಖ್ಯಮಂತ್ರಿ ಹೇಳಿದ್ರಂತೆ.
ಇದು ರಾಜಕೀಯ... ನಮಗಂತೂ ಅರ್ಥ ಆಗಲ್ಲ ಬಿಡಿ.
ನಾರಾಯಣ ನಾರಾಯಣ!

Sunday, December 13, 2009

ಸಿನೆಮಾ ಮಂದಿರಗಳ ಹೊರಗೊಂದು ರೌಂಡ್ ಅಪ್

ನಾರಾಯಣ ನಾರಾಯಣ!
ಅದೊಂದು ಸಿನೆಮಾ!
ಒಂದಷ್ಟು ಮಳೆ, ಮಳೆಯಲ್ಲಿ ಒಂದಷ್ಟು ಭಾವಾವೇಶದ ಮಾತುಗಳು, ಕೊಡಗಿಗೆ ಪ್ರಯಾಣ ನಡೆಸಿ ಅಲ್ಲೊಂದಿಷ್ಟು ಲವ್ ಸ್ಟೋರಿ, ಒಂದು ಮದುವೆ ಮನೆ, ಮಾತಿನ ಮಲ್ಲ ನಾಯಕ(ಗಣೇಶ್), ಒಬ್ಬರು ಮಿಲಿಟ್ರಿ ಅಂಕಲ್, ಇವೆಲ್ಲಾ ಇರೋ ಸಿನೆಮಾ ಉಲ್ಲಾಸದಿಂದಲೇ ಆರಂಭವಾಗುತ್ತದೆ. ಸ್ವಲ್ಪ ಹಾಸ್ಯ ಕೂಡಾ, ಆದರೆ ಸಮಯ ಕಳೆದಂತೆ ಕಥೆ ಗಂಭೀರವಾಗುತ್ತಾ ಸಾಗುತ್ತದೆ. ಕೊನೆಗೆ ಕೈ ತುಂಬ ಹೂ ಹಿಡಿದುಕೊಂಡ ನಾಯಕನನ್ನು ನೋಡಿ ಎಲ್ಲ ಪ್ರೇಕ್ಷಕರೂ ಕಣ್ಣೀರು ಕಾಕುತ್ತಾರೆ.
ಅಲ್ಲ. ಇದು ಮುಂಗಾರು ಮಳೆಯ ಕಥೆಯಲ್ಲ. ಮಳೆಯಲಿ ಜೊತೆಯಲಿ ಸಿನೆಮಾದ ಬಗ್ಗೆ ನಾನು ಹೇಳ್ತಾ ಇರೋದು. ಇದೆಲ್ಲಾ ದೃಷ್ಯ ಮುಂಗಾರುವಿನಲ್ಲೂ ನೋಡಿದೀನಲ್ಲಾ ಅಂತ ತಲೆ ಚಚ್ಚೋ ಅಗತ್ಯವಿಲ್ಲ. ಅದೇ ಪ್ರೀತಂ ಬರೆದ ಇನ್ನೊಂದು ಕಥೆಯಂತೆ ಇದು. ಮುಂಗಾರು ಮಳೆ ಯಾಕೆ ಗೆಲ್ತು ಅನ್ನೋದನ್ನ ಅಧ್ಯಯನ ಮಾಡಿ ಆ ಎಲ್ಲಾ ಅಂಶಗಳನ್ನು ಸೇರಿಸಿ ಇನ್ನೊಂದು ಸಿನೆಮಾ ಮಾಡಿದಾರಂತೆ!
ಅಂದ ಹಾಗೆ, ನಾನಂತೂ ಮಳೆಯಲಿ.. ಸಿನೆಮಾ ನೋಡಿಲ್ಲ. ಮತ್ತೆ ಹೇಗೊತ್ತು ಇಷ್ಟೆಲ್ಲ ಅಂತಾನ?

ನಾರಾಯಣ ನಾರಾಯಣ!
ನಾಲ್ಕು ಪೇಪರಿನಲ್ಲಿ ಬಂದ ವಿಮರ್ಶೆ ಓದಿದ್ರೆ ಇದೆಲ್ಲಾ ಗೊತ್ತಾಗುತ್ತಲ್ವ? ಹಾಗೇ, ಊರು ಸುತ್ತೋ ನಾನು ನಾಲ್ಕು ಜನರ ಹತ್ರ ಮಾತಾಡಿದ್ರೆ ಇದೆಲ್ಲಾ ಹೇಳ್ತಾರೆ.
ನೀವೇನಾದ್ರೂ ವಿಕ ಓದಿದ್ರಾ? ಅದರಲ್ಲಿ ಹೀಗೇನೂ ಇರಲಿಲ್ಲ ಯಾಕೆ ಅಂತ್ಲಾ? (ವಿಕ ಓದದಿದ್ರೆ ಕೇಳಿ, ಮಳೆಯಲಿ... ಓಡ್ತಾ ಇರೋ ಎಲ್ಲಾ ೪೦ ಚಿತ್ರಮಂದಿರಗಳ ಮಾಲಿಕರೂ, ಧೂಳು ಹಿಡಿದಿದ್ದ "House Full" ಫಲಕಗಳನ್ನು ಒರೆಸಿ ತೆಗೆದಿದ್ದಾರೆ ಅಥವಾ ಹೊಸದಾಗಿ ಮಾಡಿಸಿದ್ದಾರಂತೆ.)
ಗುಟ್ಟು: ವಿಕದಲ್ಲಿ ವಿಮರ್ಶೆ ಬರೀತಿದ್ದಾ ದೇವಶೆಟ್ಟಿ ಮಹೇಶ್ ಈ ಸಿನೆಮಾಗೆ ಸಂಭಾಷಣೆ ಬರೆದಿದ್ದಾರೆ.
ಸಿನೆಮಾ ಹಿಟ್ ಆಗ್ಬೇಕಾ? ಮಳೆ, ಮಾತು, ಗನ್ ಮ್ಯಾನ್, ಮೊಲ ಏನೂ ಬೇಕೇ ಅಂತೇನಿಲ್ಲ, ದಿನ ಪತ್ರಿಕೆಗಳಲ್ಲಿ ವಿಮರ್ಶೆ ಬರೊಯೋರ ಹತ್ರ ಸಂಭಾಷಣೆ ಬರೆಸಿ!

Sunday, November 8, 2009

ಜನರೇ ಕಾರಣ -ರಾಜಕಾರಣಿಗಳ ಮೇಲೊಂದು ಅನುಕಂಪದ ನೋಟ

ನಾರಾಯಣ ನಾರಾಯಣ!
ಹಲವು ದಿನಗಳಿಂದ ನೋಡ್ತಾ ಇದ್ದೇನೆ. ಮುಖ ನೋಡಲ್ಲ ಅಂತಾರೆ, ಮತ್ತೆ ಅಣ್ಣ ತಮ್ಮ ಅಂತಾರೆ, ಎಲ್ಲದ್ರ ಜೊತೆ ರಾಜ್ಯದ ಹಿತಕ್ಕಾಗಿ ಅಂತಾನೇ ಇರ್ತಾರೆ. ನಿಮಗೆಲ್ಲಾ ಗೊತ್ತಿರೋ ರೀತಿ ಅವರೇ ನಿಮ್ಮ ರಾಜಕಾರಣಿಗಳು.

ಮನೆ ಕಟ್ಟಿಸುತ್ತೆ, ಪರಿಹಾರ ಕೊಡುತ್ತೆ ಅಂತ ಕಾಯ್ತಿರೋ ಉತ್ತರ ಕರ್ನಾಟಕದ ಸಂತ್ರಸ್ತ ಜನ ಕೂಡಾ ಸರಕಾರದ ಮೇಲೆ ಭರವಸೆಯಿಂದ ಕಾಯ್ತಾ ಇದಾರೆ. ಎಲ್ಲಾ ಜನ ರಾಜಕಾರಣಿಗಳನ್ನ ಬೈತ್ತಾ ಇದಾರೆ. ನಾರಾಯಣ ನಾರಾಯಣ!

ಪ್ರೀತಿಯ ಜನರೇ,
ನಿಮ್ಮ ಪರಿಸ್ಥಿತಿ, ಅಸಹಾಯಕತೆ ನಂಗೆ ಅರ್ಥ ಆಗುತ್ತೆ. ಆದ್ರೆ ನಿಮ್ಮದೇನೂ ತಪ್ಪಿಲ್ಲ, ರಾಜಕಾರಣಿಗಳೇ ದುಷ್ಟರು ಅಂತ ನಿಮ್ಮ ಪರ ನಿಲ್ಲೋ ಸ್ಥಿತಿಯಲ್ಲಿ ನಾನಿಲ್ಲ. ಯಾಕಂದ್ರೆ ನಿಮಗಿಂತ ಜಾಸ್ತಿ ಅನುಕಂಪ ನಂಗೆ ನಾಯಕರ ಮೇಲಿದೆ. ಅವರನ್ನ ಬೈಯೋದು ನಿಮ್ಮ ಮನಸ್ಸಿನ ಭಾರ ಕ್ಡಿಮೆಯಾಗಿಸಬಹುದು, ಮಾಧ್ಯಮಗಳಿಗೆ ಅದು ಉದ್ಯೋಗವಾಗಿರಬಹುದು. ಆದ್ರೆ ಬರೀ ಸುತ್ತಾಡ್ತಿರೋ ನನ್ನಂತೋರಿಗೆ ಮಾತ್ರ ಅವರನ್ನ ನೋಡಿದ್ರೆ ಮರುಕ ಬರುತ್ತೆ.
ಅಂಥವರಿಗೆ ಯಾಕೆ ಓಟು ಹಾಕಿದ್ರಿ ಅಂತ ನಾನು ಕೇಳ್ತೀನೆ ಅಂತ ನಿಮಗೂ ಗೊತ್ತು. ಬರೀ ರೌಡಿಗಳೇ ಓಟಿಗೆ ನಿಂತ್ರೆ ಇನ್ನೇನ್ ಮಾಡ್ಲಿ ಅಂತ ತಾನೇ ನಿಮ್ಮ ಉತ್ತರ? ತಡೀರಿ. ಇದೇ ಬಳ್ಳಾರಿ ಹೇಗಿತ್ತು ನೆನಪು ಮಾಡ್ಕೊಳ್ಳಿ. ಆಗ ಬಿಜೆಪಿ ನಿಜವಾಗಿಯೂ ಹಣದ ಹಿಂದೆ ಬಿದ್ದಿರ್ಲಿಲ್ಲ. ಆದ್ರೆ ಬಳ್ಳಾರಿಯಲ್ಲಿ ಅಷ್ಟಿಟ್ಟು ಹಣ ಹಂಚಿ, ಬಡವರನ್ನ ಓಲೈಸಿ ಗೆಲ್ಲೋ ಕಾಂಗ್ರೆಸ್ ಮೆರಿತಾ ಇತ್ತು. ಆವತ್ತು ಬಿಜೆಪಿಗೆ ಓಟು ಹಾಕೋಣ ಅಂತ ನಿಮಗೇನಾದ್ರೂ ಅನ್ನಿಸ್ತಿತ್ತಾ? ಆವಾಗ ಬಿಜೆಪಿಯನ್ನು ಗೆಲ್ಲಿಸದ ನೀವು ಈಗೇಕೆ ಬಿಜೆಪಿಗೆ ಮುಗಿಬಿದ್ದು ಓಟು ಹಾಕ್ತೀರ? ಸುಷ್ಮಾರನ್ನು ಗೆಲ್ಲಿಸೊದಿಕ್ಕಾಗಿ ರಾಜಕೀಯ ಕಲಿತ ಜನ ಬಳ್ಳಾರಿ ರಾಜಕಾರಣವನ್ನು ಹೇಗೆ ತಿರುಗಿಸಿದ್ರು ನಿಮಗೆ ಗೊತ್ತು ತಾನೆ?
ಹಣ, ಅವ್ಯವಹಾರ, ಹೊಲಸು ರಾಜಕೀಯ, ಭ್ರಷ್ಟಾಚಾರ, ನಾಟಕ ಅಂತೆಲ್ಲ ನೀವೇನನ್ನ ಕರೀತೀರೋ, ಎಲ್ಲಾ ಬಿಡೋಕೆ ರೆಡ್ಡಿಗಳು ಸಿದ್ಧರಿದಾರೆ. ಅವರನ್ನ ಗೆಲ್ಲಿಸೋಕೆ ನೀವು ರೆಡೀನಾ? ಹೌದು ಅಂತೀರ, ಆದ್ರೆ ನೀವು ಹಾಗೆ ಮಾಡಲ್ಲ ಅಂತ ನಂಗೊತ್ತು. ಅಲ್ಲಿಂದ್ಲೇ ಶುರು.
ಇದೇ ಯಡಿಯೂರಪ್ಪ, ಅನಂತು ಎಲ್ಲ ಸೇರಿ ಹಣ ಇಲ್ಲ, ಜನ ಬೆಂಬಲ ಇಲ್ಲ ಅಂತಿರೋ ಕಾಲದಲ್ಲಿ ಎಷ್ಟು ಕಷ್ಟ ಪಟ್ಟಿದ್ರು ಅಂತ ಗೊತ್ತಾ? ತಮ್ಮ ಉದ್ಯೋಗ, ವೈಯಕ್ತಿಕ ಜೀವನ, ನೆಮ್ಮದಿ ಎಲ್ಲಾ ಬಿಟ್ಟು ಬಂದವರು ಅಧಿಕಾರ ಬಂದ ಕಾರಣಕ್ಕಷ್ಟೇ ಬದಲಾದ್ರು ಅಂತೀರ? ಆ ಕಾಲದಲ್ಲಿ ಹಣ ಮಾಡ್ಬೇಕು ಅನ್ನೋದೇ ಉದ್ದೇಶ ಅಂತಿದ್ರೆ ಅಷ್ಟೆಲ್ಲಾ ಕಷ್ಟ ಬರ್ತಿದ್ರಾ?

Tuesday, November 3, 2009

ಆಡಳಿತವನ್ನೇ ಗುಜರಾತಿಗೆ ಹೊರಗುತ್ತಿಗೆ ನೀಡಿ

ನಾರಾಯಣ ನಾರಾಯಣ!
ಕೊನೆಗೂ ಕರ್ನಾಟಕದಲ್ಲಿ ವಿರೋಧ ಪಕ್ಷವೊಂದು ಕಾಣಿಸಿಕೊಂಡಿದೆ. ಅದೇ ಬಿಜೆಪಿ!
ಕಥೆ ಇಷ್ಟೇ:
ಪಕ್ಷದಲ್ಲಿ ಮೂಲ ಬಿಜೆಪಿಗರು ಹಲವರಿದ್ದಾರೆ. ಉದಾ: ಕರುಣಾಕರ ರೆಡ್ಡಿ, ಜನಾರ್ಧನ ರೆಡ್ಡಿ, ಶ್ರೀರಾಮುಲು. ಇವರೆಲ್ರೂ ನೇರವಾಗಿ ಬಿಜೆಪಿಗೇ ಸೇರಿದವರು. ಮೂಲತಃ ಮಣ್ಣಿನ ಮಕ್ಕಳಾದ ಇವರು ಕಷ್ಟದಿಂದ ಮೇಲೆ ಬಂದವರು. ಬಂಡೆ ಒಡೆಯುವುದೇ ಇವರ ಕಾಯಕ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಇವರೇ ಕಾರಣ ಅಂತಾರೆ ಜನ.
ದುರಾದೃಷ್ಟ ಅಂದ್ರೆ ರಾಜ್ಯದ ಅಧಿಕಾರದ ಚುಕ್ಕಾಣಿ ಇರೋದು ಜನಸಂಘ ಮೊದಲಾದ ಪಕ್ಷಗಳಿಂದ ವಲಸೆ ಬಂದ ಕೆಲವರ, ಇತರ ಸಂಘಟನೆಗಳಿಂದ ಬಂದ ಜನರ ಕೈಲಿ. ಈ ಜನ ಆ ಬಂಡೆ ಒಡಿಯೋರ ಕೆಲಸಕ್ಕೆ ತೊಂದರೆ ಕೊಡ್ತಾನೇ ಬಂದಿದ್ದಾರೆ.
ಬಂಡೆ ಒಡಿಯೋ ಜನರ ದೇಹ ಗಟ್ಟಿಮುಟ್ಟಾಗಿರುತ್ತೆ. ಆದ್ರೆ ನಮ್ ಆಡಳಿತ ಮಾಡೋ ಜನಕ್ಕೆ ಸ್ವಲ್ಪ ಶಕ್ತಿ ಬೇಕಲ್ವಾ? ಅದಕ್ಕೇ ಮೊನ್ನೆ ಮೊನ್ನೆ ಸುತ್ತೂರು ಮಠದಲ್ಲಿ ಎಲ್ರಿಗೂ ಯೋಗಾಸನ ಮಾಡಿಸಲಾಯ್ತು. ಎಲ್ಲಾ ಮಂತ್ರಿಗಳಿಗೂ ತುಂಬ ಶಕ್ತಿ ಬಂತು. ಮೋದಿ ಹಾಸ್ಪಿಟಲಿಂದ ಡಾಕ್ಟ್ರೂ ಬಂದ್ರು. ಕೊನೆಗೂ ಸರಕಾರ ದಷ್ಟ ಪುಷ್ಟ, ಆರೋಗ್ಯವಂತವಾಯ್ತು.
ಅದ್ರಿಂದಾಗಿಯೇ ಇರಬಹುದು. ಬಳ್ಳಾರಿಯನ್ನು ಆಳುತ್ತಿದ್ದ ಮೂಲ ಬಿಜೆಪಿಯ ಮಂತ್ರಿಗಳಿಗೆ ತಮ್ಮ ಹೊಸ ಶಕ್ತಿ ಸಂಪೂರ್ಣ ರಾಜ್ಯವನ್ನಾಳಲು ಸಾಕು ಎಂಬ ಭಾವನೆ ತಂದಿತು. ಆಗ ಬಂತು ಪ್ರವಾಹ. ಪರಿಹಾರ ಮಾಡ್ಬೇಕು ಎಂಬ ಅತಿಯಾದ ಉತ್ಸಾಹ ಎರಡೂ ಬಣಕ್ಕೂ. ಹೌದು, ಪ್ರವಾಹದಲ್ಲಿ ಎರಡು ಬಣಗಳು ಸೃಷ್ಟಿಯಾಗಿ ಆಗಿತ್ತು. ನಾವೇ ಪರಿಹಾರ ಮಾಡ್ತೇವೆ. ನೀವು ಸುಮ್ಕಿರಿ ಅಂತ ವಲಸಿಗರ ಗುಂಪು; ಇಲ್ಲ, ನಮಗೇ ಹೆಚ್ಚು ಶಕ್ತಿ ಇದೆ. ನಾವೇ ಪರಿಹಾರ ಮಾಡ್ತೇವೆ ಅಂತ ಮೂಲ ಬಿಜೆಪಿಗರು. ನೆರೆ ಪರಿಹಾರದ ಬಗ್ಗೆ ಅತಿಯಾದ ಕಾಳಜಿ ಮಿತ್ರ ಪಕ್ಷಗಳ ನಿದ್ದೆಗೆಡಿಸಿತು. ಇದು ಸಮ್ಮಿಶ್ರ ಸರಕಾರವಲ್ಲದಿದ್ರೂ ಬಿಜೆಪಿಯು ಜೆಡಿಎಸ್, ಕಾಂಗ್ರೆಸ್ ಮುಂತಾದ ಮಿತ್ರಪಕ್ಷಗಳನ್ನು ಹೊಂದಿರುವುದು ವಿಶೇಷ.
ಮಿತ್ರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ತುಂಬಾ ಬೇಸರ. ಒಳ್ಳೆದಾಗ್ಲಿ ಅಂತ ಆಶಿಸಿದ್ರು. "ಛೆ, ಹೀಗಾಗ ಬಾರ್ದಿತ್ತು, ಎಲ್ಲಾ ತಣ್ಣಗಾಗುತ್ತೆ" ಅಂತಂದ್ರು.

---
ಹೀಗೆಲ್ಲ ಆಗ್ತಾ ಇದ್ರೆ ನಂಗನಿಸಿದ್ದು: ಇವರಿಗೆ ಆಡಳಿತ ಮಾಡೋದಿಕ್ಕಾಗಲ್ಲ ಅಂದ್ರೆ ಅದನ್ನು ಗುಜರಾತಿಗೆ ಹೊರಗುತ್ತಿಗೆ (out source) ನೀಡ ಬಹುದಲ್ವಾ? ಅವರು ಅಲ್ಲಿಂದಾದ್ರೂ ಖಂಡಿತಾ ಸ್ವಲ್ಪ ಚೆನ್ನಾಗೇ ನಡೆಸ್ಬಹುದಲ್ವಾ?

Tuesday, October 27, 2009

ತುಪ್ಪ ಸುರಿಯುವವರು ನೀರೆರೆದಾಗ

ಆ ವ್ಯಕ್ತಿ ತುಂಬಾ ಹಿರಿಯರು. ಯಾವಾಗಲೂ ತುಪ್ಪ ಸುರಿಯುವವರು. ಈಗ ನೀರೆರೆಯುತ್ತೇನೆ ಎಂದು ಹೇಳಿದ್ದು ಎಲ್ಲೆಡೆ ಸುದ್ದಿಯಾಗಿದೆ. ಆ ವ್ಯಕ್ತಿ ತುಪ್ಪ ಸುರಿಯುತ್ತಿದ್ದುದೆಲ್ಲ ಬಾಯಿಗೋ ಮೂಗಿಗೋ ಅಲ್ಲ. ಅದು ಬೆಂಕಿಗೆ! ಈಗ ಅರ್ಥವಾಗಿರಬಹುದು ಅವರು ನಮ್ಮ ನೆಚ್ಚಿನ ಮಾಜಿ ಪ್ರಧಾನಿಗಳು ಎಂದು. ಬಿಜೆಪಿಯ ತಿಕ್ಕಾಟ ಬೆಂಕಿಯಾಗುತ್ತೆ. ಮತ್ತೆ ನೀರು ಸುರಿಯುತ್ತದೆ. ಎಲ್ಲ ತಣ್ಣಗಾಗುತ್ತೆ ಎಂದು ಅವರ ಭವಿಷ್ಯ.

Thursday, February 5, 2009

ಅಲ್ಲಿ ಪಬ್ ಇರಲೇ ಇಲ್ಲ -ಸಾಕ್ಷ್ಮ್ಯ

ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ’ಪಬ್ ಮೇಲಿನ ದಾಳಿ’ ಎಂದೇ ಪ್ರಖ್ಯಾತವಾದ ಪ್ರಕರಣ ದಾರಿ ತಪ್ಪಿಸುವ ಯತ್ನವಾಗಿದ್ದು ಅಲ್ಲಿ ಪಬ್ ಇರಲೇ ಇಲ್ಲ ಎಂದು ತಿಳಿದು ಬಂದಿದೆ.
ಯಾವುದೇ ಟಿವಿ ಚಾನೆಲ್ ಗಳಲ್ಲಿ ಯುವತಿಯರ ಮೇಲಿನ ಆಕ್ರಮಣವನ್ನೇ ಪದೇ ಪದೇ ನೇರ ಪ್ರಸಾರ ಮಾಡಿದ್ದಲ್ಲದೆ ಎಲ್ಲೂ ಪಬ್ ದೃಶ್ಯಗಳನ್ನು ಪ್ರಸಾರ ಮಾಡಿಲ್ಲ.
ಅಂಥಹ ಯಾವುದೇ ಪಬ್ ಇದ್ದ ಬಗ್ಗೆ ಸರಕಾರದ ಬಳಿ ದಾಖಲೆ ಇಲ್ಲ.
ತಾವು ಪಬ್ಬಿಗೆ ಹೋಗಿರುವುದನ್ನು/ ಪಬ್ಬಿನಲ್ಲಿರುವಾಗ ಆಕ್ರಮಣವಾಗಿರುವುದನ್ನು ಯಾವುದೇ ಯುವತಿಯರೂ ದೂರು ನೀಡಿಲ್ಲ.
ಈ ಎಲ್ಲಾ ಹಿನ್ನೆಲೆಯಲ್ಲಿ ದಾಳಿಯ ಉದ್ದೇಶ ಏನಿರಬಹುದು ಎಂದು ತಿಳಿಯುವುದಕ್ಕೋಸ್ಕರ ನಗರ ಸಂಚರಿಸಿದಾಗ, ಕೆಲವು ಅಭಿಪ್ರಾಯಗಳು ವ್ಯಕ್ತವಾದವು. ಓದಿ:

-ದೇಶದಲ್ಲಿ ಅತ್ಯಾಚಾರ, ಕೊಲೆ, ಸುಲಿಗೆ ಮುಂತಾದ ಕ್ಷುಲ್ಲಕ ಪ್ರಕರಣಗಳು ಎಷ್ಟೇ ನಡೆದರೂ, ಈ ಥರ ಥಳಿತ, ನೆಲದ ಮೇಲೆ ಬೀಳಿಸುವುದು ಹೆಚ್ಚು ನಡೆಯುತ್ತಿರಲಿಲ್ಲ. ಘಟನೆಯನ್ನು ನೂರಾರು ಬಾರಿ ಪ್ರಸಾರ ಮಾಡಿದ ಚಾನೆಲ್ ಗಳಿಗೆ ’ನಾರದ’ ಪ್ರಶಸ್ತಿ ನೀಡಿ ಗೌರವಿಸಬೇಕು.
-ಪೋಲಿಸರಿಗೆ ಘಟನೆಯ ಮಾಹಿತಿ ನೀಡಿ ಅದನ್ನು ತಡೆದಿದ್ದಲ್ಲಿ ಈ ಮಟ್ಟಿನ ಜಾಗೃತಿ ಉಂಟಾಗುತ್ತಿರಲಿಲ್ಲ. ಅಲ್ಲಿ ಪಬ್ ಇರಲಿಲ್ಲ ಎಂಬ ವಿಚಾರವನ್ನು ಬಹಿರಂಗ ಪಡಿಸಿದ ಮಾಧ್ಯಮಗಳಿಗೆ ಧನ್ಯವಾದಗಳು.
- ಇದು ಅಪ್ಪಟ ಕೋಮುವಾದ. ದೇಶದಲ್ಲಿ ಪಬ್ಬುಗಳಂತಹ ಜಾತ್ಯತೀತ ಶಕ್ತಿಗಳನ್ನು ಅಡಗಿಸಿದ ರಾಮ ಸೇನೆಯನ್ನು ನಿಷೇದಿಸಬೇಕು. ಧಾಳಿಯನ್ನು ಖಂಡಿಸಿ ನಡೆದ ಪ್ರತಿಭಟನೆಗೆಳಲ್ಲಿ ’ಕೋಮುವಾದ ಅಳಿಸಿ, ಜಾತ್ಯತೀತತೆ ಉಳಿಸಿ’ ಎಂಬ ಫಲಕಗಳೇ ಇದಕ್ಕೆ ಸಾಕ್ಷಿ.

ನರಾಯಣ ನಾರಾಯಣ!

ನೀರು ಸರಬರಾಜಿಗೆ ವಿದಾಯ!


ನೀರು ಸರಬರಾಜು, ತ್ಯಾಜ್ಯ ನೀರು ಕೊಳವೆಗಳ ಬದಲಾವಣೆ ಇತ್ಯಾದಿಗಳಿಗೆ ವಿದಾಯ ಹೇಳಲು ಸರಕಾರ ನಿರ್ಧರಿಸಿದ್ದನ್ನು ಸರಕಾರದ ಜಾಹೀರಾತಲ್ಲೇ ಓದಿ. ನಾರಾಯಣ ನಾರಾಯಣ!