Thursday, July 29, 2010

ಶ್ರೀರಾಮುಲು ಕಟ್

ನಾರಾಯಣ ನಾರಾಯಣ!

ಕ್ಷೌರದಂಗಡಿಗೆ ಹೋಗಿದ್ದೆ. ಹೌದು, ನಾನೆ... ಯಾಕೆ?
ಓ, ಜುಟ್ಟು ಬಿಟ್ಟಿರೋ ನಾನ್ಯಾಕೆ ಕ್ಷೌರದಂಗಡಿಗೆ ಅಂತಾನ? ಗುಟ್ಟಿರೋದೇ ಅಲ್ಲಿ. ಲೋಕದ ಸುದ್ದಿಗಳೆಲ್ಲ ನಂಗೆ ಗೊತ್ತಾಗೋದೇ ಅಲ್ಲಿ! ಕ್ಷೌರಕ್ಕೆ ಕಾಯೋರ ಮಾತುಗಳು ನಂಗೆ ಎಷ್ಟೋ ಸುದ್ದಿಗಳ ಮೂಲ. ಇವತ್ತು ಯಾವ ಸುದ್ದಿ ಸಿಗುತ್ತೆ ಅನ್ನೋ ಕುತೂಹಲದಲ್ಲಿದ್ದಾಗಲೇ ಕುರ್ಚಿ ಮೇಲೆ ಕೂತವನು ಶ್ರೀರಾಮುಲು ಕಟ್ ಅಂದು ಬಿಟ್ಟ. ಉದ್ದ ಕೂದಲು ಬಿಡೋ ಶ್ರೀರಾಮುಲು ವಿನ್ಯಾಸ ಯಾಕೆ ಅಂತ ಕುತೂಹಲದಿಂದಲೇ ಕೇಳಿದೆ.

ಶ್! ಅಂದವನೇ ಅಲ್ಲಿದ್ದ ಟಿವಿಯತ್ತ ತನ್ನ ಕಣ್ಣು ನೆಟ್ಟ. ಯಾವಾಗಲೂ ಸನ್ ಟಿವಿ ಇರ್ತಿದ್ದ ಟಿವಿಯಲ್ಲಿ ಟಿವಿ9 ಬರ್ತಾ ಇತ್ತು!
ಬಳ್ಳಾರಿಗೆ ಕೆಟ್ಟ ದೃಷ್ಟಿ ಅಂತಾರೆ ಶ್ರೀರಾಮುಲು ಮತ್ತು ರೆಡ್ಡಿ ಬ್ರದರ್ಸ್, ಅವರಿನ್ನೂ ಬಚ್ಚಾ ಅಂತಾರೆ ಕಾಂಗ್ರೆಸ್, ಇದು ಈ ಹೊತ್ತಿನ ವಿಷೇಶ -ಶ್ರೀರಾಮುಲು ಕಟ್.

ಕೇಶ ಮಂಡನ ವಿಶೇಷ ಕಾರ್ಯಕ್ರಮಕ್ಕೆ ಸ್ವಾಗತ... ಅಂತೆಲ್ಲಾ ಕೇಳಿದಾಗ ಅರ್ಥ ಆಯ್ತು ಇದ್ಯಾವ ಕಟ್ ಅಂತ!
ಅಲ್ಲ, ಅರುವತ್ತು ವರ್ಷದಿಂದ ಬಳ್ಳಾರಿಯ ಕಡೆಗೆ ತಲೆಯೇ ಹಾಕದ ಕಾಂಗ್ರೆಸ್ ಈಗೇಕೆ ಇಲ್ಲಿ ಬರ್ತಾ ಇದೆ ಅಂತ ಬಳ್ಳಾರಿಯ  ಜನಕ್ಕೆಲ್ಲಾ ಭಯವಾಗಿದೆಯಂತೆ. ಹಿಂದೊಮ್ಮೆ ಇದೇ ಕ್ಷೇತ್ರದಿಂದ ಲೋಕಸಭೆಗೆ ಗೆದ್ದಿದ್ದ ಸೋನಿಯಾಗೆ ಬಳ್ಳಾರಿ ಹೆಸರು ಮತ್ತೆ ನೆನಪಾಗಿರಬಹುದು.

ಡ್ಯಾನ್ಸ್ ಮಾಡ್ತಾ, ಹಾಡು ಹಾಡ್ತಾ, ಭರ್ಜರಿ ಊಟದ ಜತೆಗೆ ಬಳ್ಳಾರಿ ಪಿಕ್-ನಿಕ್ ಹೊರಟಿರುವ ಪಾರ್ಟಿ ಆಡಳಿತ ಪಕ್ಷದ ಥರಾ ಸಂಭ್ರಮದಲ್ಲಿದ್ದಾರೆ. ಅವರಿಗೆ ಮೈಸೂರು ಪೇಟ, ಹಾರಾರ್ಪಣೆ ಇತ್ಯಾದಿ ನೋಡಿಯೇ ಜನ ಖುಶಿಯಾಗಿದ್ದಾರೆ. ಇಂತಹ ಹೋರಾಟಗಳನ್ನು ಮಾಡುತ್ತಲೇ ಬಂದ ಜನತಾ ಪರಿವಾರದಲ್ಲಿ ಅನುಭವ ಪಡೆದಿರುವ ಸಿದ್ರಾಮು, ಇಬ್ರಾಹಿಮ್ಮು, ದೇಸ್ಪಾಂಡೆ ಮೊದಲಾದವರೇ ಯಾತ್ರೆಯ ನೇತೃತ್ವ ವಹಿಸಿದ್ದು, ಅನುಭವ ಫಲ ನೀಡಿದೆ.
ವಿಪಕ್ಷದವರು ಇಷ್ಟೆಲ್ಲಾ ಸಂಭ್ರಮದಲ್ಲಿರುವಾಗ, ತಲೆ ಬೋಳಿಸಿ, ಕಪ್ಪು ಬಟ್ಟೆ ಧರಿಸಿ, ಬರಿಗಾಲು, ಮಿತಾಹಾರ ಮೂಲಕ ಆಡಳಿತ ಪಕ್ಷದವರು ವಿರೋಧದ ಮಾತಾಡುತ್ತಿದ್ದಾರಲ್ಲ!

ಇದು ಈ ಹೊತ್ತಿನ ವಿಷೇಶ... ಕ್ಷಣ ಕ್ಷಣದ ಸುದ್ದಿಗಾಗಿ

Monday, April 5, 2010

ಬಿಬಿಎಂಪಿ ಫಲಿತಾಂಶ -ಕುಮಾರಣ್ಣ ಫುಲ್ ಖುಷ್

ಬಿಬಿಎಂಪಿ ಚನಾವಣೆ ಮುಗಿದು ಫಲಿತಾಂಶ ಪ್ರಕಟವಾದ ಹಿನ್ನೆಲೆಯಲ್ಲಿ ಪತ್ರಿಕೆಗಳೆಲ್ಲ ಬಿಜೆಪಿ ಹಿಂದೆ ಬಿದ್ದಿದ್ರೆ ನಾನು ಮಾತ್ರ ವಿರೋಧ ಪಕ್ಷಗಳ ಹಿಂದೆ ಸುತ್ತಾಡಿ ಬಂದೆ.
ಕುಮಾರಣ್ಣ ಹೇಳಿದ್ದಿಷ್ಟು:
"ಈ ಬಿಬಿಎಂಪಿ ಚುನಾವಣೆ ಏನು ನಡೀತು... ಅದರ ಒಂದು ಫಲಿತಾಂಶ ಏನು ಬಂದಿದೆ..., ಅದರ ಬಗ್ಗೆ ನಂಗೆ ಏನು ಅನ್ನಿಸ್ತಾ ಇದೆ ಅಂದ್ರೆ, ಫಲಿತಾಂಶವನ್ನು ಕೂಲಂಕುಶವಾಗಿ ಪರಿಶೀಲಿಸಿದಾಗ ಜನತೆ ಜೆಡಿಎಸ್ ಪರವಾಗಿ ತೀರ್ಪು ನೀಡಿರುವುದು ಸ್ಪಷ್ಟವಾಗಿ ಕಂಡುಬರ್ತಾ ಇದೆ ಅನ್ನೋದನ್ನ ನಾನು ಹೇಳೋದಕ್ಕೆ ಇಚ್ಛೆ ಪಡ್ತೇನೆ. ಅದು ಹೇಗೆ ಅಂತಂದ್ರೆ, ಬಿಜೆಪಿ ಅತೀ ಹೆಚ್ಚು ಸ್ಥಾನ ಗಳಿಸುತ್ತೇ ಅನ್ನತಕ್ಕಂತಹ ವಿಚಾರ ನಮಗೆಲ್ಲಾ ಗೊತ್ತೇ ಇದೆ. ಆದ್ರೆ ಬಹುಮತಕ್ಕೆ ಸ್ವಲ್ಪ ಕಡಿಮೆ ಸೀಟುಗಳನ್ನೇನಾದ್ರೂ ಪಡೆದು ಮತ್ತೆ ಈ ಆಪರೇಶನ್ ಕಮಲ ಅಂತ ಏನು ಕರೀತಾರೆ, ಅದ್ರ ಮೂಲಕ ನಮ್ಮ ಪಕ್ಷದ ವಿಜೇತರನ್ನು ಪಕ್ಷಾಂತರ ಮಾಡುವಂತಹ ನೀಚ ಕೆಲಸಕ್ಕೇನಾದ್ರು ಕೈ ಹಾಕ್ತಾರೋ ಅನ್ನೋ ಭಯ ನಮ್ಮೆಲ್ಲರನ್ನ ಕಾಡಿತ್ತು. ಆದ್ರೆ ಬೆಂಗಳೂರಿನ ಪ್ರಜ್ಞಾವಂತ ಮತದಾರರು ಯಾರಿದಾರೆ, ಅವರು ಬಿಜೆಪಿಗೆ ಬಹುಮತ ನೀಡಿಈ ಆಪರೇಶನ್ ಕಮಲವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ ಅಂತ ನಾನು ಹೇಳೋಕೆ ಇಚ್ಛೆ ಪಡ್ತೇನೆ. ಆಪರೇಶನ್ ಕಮಲದ ಅತ್ಯ ಬಿಜೆಪಿಗೆ ಬೀಳದೇ ಇರೋದಕ್ಕೆ ನಂಗೆ ತುಂಬಾ ಸಂತೋಷ ಆಗ್ತಾ ಇದೆ. ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಬೆಂಗಳೂರಿನ ಅಭಿವೃದ್ಧಿಗೆ ಏನು ಶ್ರಮ ಪಟ್ಟಿದ್ದಾರೆ, ಅದರ ಪರಿಣಾಮ ಇಲ್ಲಿ ಸ್ಪಷ್ಟವಾಗಿ ಕಂಡುಬರ್ತದೆ.

ಇನ್ನು ದೇಶಪಾಂಡೆ ಅವರು ಏನಂತಾರೆ ಓದಿ:
ಬಿಜೆಪಿ ಸರಕಾರ ಅಭಿವೃದ್ಧಿ ವಿರೋಧಿ. ನಮ್ಮ ಪಕ್ಷ ಈ ಹಿಂದಿನ ಅಸೆಂಬ್ಲಿ ಚುನಾವಣೆಯಲ್ಲಿ ಯಾಕೆ ಸೋತಿದೆ ಎಂಬ ಆತ್ಮ ವಿಮರ್ಶೆಯನ್ನು ಮಾಡ್ತಾ ಇದ್ದೇವೆ. ಅದಾದ ನಂತ್ರ ಬಿಬಿಎಂಪಿ ಚುನಾವಣೆಯ ಸೋಲಿನ ಬಗ್ಗೆಯೂ ವಿಮರ್ಶೆ ಮಾಡ್ತೇವೆ.  ಈಗ್ಲೇ ಏನೂ ಹೇಳಕ್ಕಾಗಲ್ಲ.

Monday, January 4, 2010

ಇನ್ನೆಂದೂ ಪಕ್ಷದಲ್ಲಿ ಅಶಿಸ್ತಿಲ್ಲ -ಸದಾನಂದ ಗೌಡ ಮತ್ತೊಮ್ಮೆ ಹೇಳಿಕೆ.

ಪಕ್ಷದಲ್ಲಿ ಇನ್ನುಮುಂದೆ ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶವಿಲ್ಲ. ನಾವು ಎಲ್ಲರೂ ಈಗ ಒಂದಾಗಿದ್ದೇವೆ ಎಂದು ಬ್ಜ್ಪಿ ರಾಜ್ಯಾಧ್ಯಕ್ಷ ಸದಾನಂದ ಗೌಡ ಮತ್ತೆ ಹೇಳಿದ್ದಾರೆ. ಈ ಮೊದಲೂ ಅನೇಕ ಬಾರಿ ಗೊಂದಲಗಳುಂಟಾಗ ಇದೇ ರೀತಿ ಹೇಳಿದ್ದ ಅವರು, ಪದೇ ಪದೇ ಮಾತು ಬದಲಿಸುವ ವ್ಯಕ್ತಿಯಲ್ಲವೆಂದು ಸ್ಪಷ್ಟವಾಗಿದೆ.