Wednesday, February 28, 2007

ಗೌರವ ಬೇಡ, ಗರ್ವ ಸಾಕು: ಮುತ್ತಪ್ಪ ರೈ!

ಮುತ್ತಪ್ಪ ರೈಗೆ ಗರ್ವ ಒಂದೇ ವಾರದಲ್ಲಿ ಸಾಕಾಗಿದೆ. ನನ್ನ ಹೆಸರು 'ಗೌರವ ಸಂಪಾದಕ' ಹುದ್ದೆಯಿಂದ ತೆಗೆದುಬಿಡಿ ಎಂದು ಗರ್ವ ಬಳಗದ ಬಳಿ ಹೇಳಿದ್ದಾರೆ. ಹೊಸ ರೂಪದಲ್ಲಿ ಪುನರಾರಂಭಗೊಂಡ ಗರ್ವದ ಗೌರವ ಸಂಪಾದಕ ಎಂದು ತಮ್ಮ ಹೆಸರನ್ನು ಹಾಕಲು ಮುತ್ತಪ್ಪ ರೈ ಒಪ್ಪಿದ್ದರು. ತಮ್ಮ ಭೂಗತ ಜೀವನದ ಕಥೆಯನ್ನು ಮುತ್ತಪ್ಪ "ರೈ"ಟ್ಸ್ ಎಂಬ ಕಾಲಂ ಅಡಿ ಬರೆಯುವುದಾಗಿ ಒಪ್ಪಿದ್ದರು. ಆದರೆ ಪತ್ರಿಕೆ ಸಂಪಾದಕ (ಕಿರಿ)ಕಿರೀಟದಿಂದ ಅವರು ರೋಸಿ ಹೋಗಿದ್ದಾರೆ. ಇದಕ್ಕೆ ಕಾರಣ ಸಾಯಿ ಫೌಂಡೇಷನ್ನಿನ ಪದ್ಮಾ ಭಟ್ ಬಗ್ಗೆ ಗರ್ವದಲ್ಲಿ ಬಂದ ಲೇಖನ. ಅದನ್ನೋದಿದ ಪದ್ಮಾ ನೇರ ಮುತ್ತಪ್ಪ ರೈ ಬಳಿ ಹರಿಹಾಯ್ದಿದ್ದರು. ಅಷ್ಟಕ್ಕೇ ಸಾಕಾಗಿದೆ ರೈಗೆ. ನಾನು ನನ್ನ ಲೇಖನವನ್ನೇನೋ ಬರೆಯುತ್ತೇನೆ. ಆದರೆ ನನ್ನನ್ನು ಗೌರವ ಸಂಪಾದಕ ಎಂದು ಹಾಕಬೇಡಿ ಎಂದು ಹೇಳಿದ್ದಾರೆ.

Monday, February 26, 2007

ಹೊಸ ಗರ್ವ: ಮುತ್ತಪ್ಪ ರೈ ಕೈಯಲ್ಲಿ ಗನ್ನಲ್ಲ, ಪೆನ್ನು!

ನಾರಾಯಣ ನಾರಾಯಣ!
ಮುತ್ತಪ್ಪ ರೈ ಕೈಯಲ್ಲೂ ಪೆನ್!
ಹೊಸ ರೂಪದಲ್ಲಿ ಮತ್ತೆ ಆರಂಭವಾದ 'ಗರ್ವ' ವಾರಪತ್ರಿಕೆಗೆ ಮುತ್ತಪ್ಪ ರೈ ಬರೆಯುತ್ತಿದ್ದಾರಂತೆ! ಭೂಗತ ಜಗತ್ತಿನಲ್ಲಿ ಗನ್ ಹಿಡಿಯುತ್ತಿದ್ದ ರೈ ಮುಂದೆ ಜೈಲಿನಿಂದಲೇ ಭೂಗತ ಜಗತ್ತನ್ನು ನಿಯಂತ್ರಿಸಿ ಸುದ್ದಿ ಮಾಡಿದ್ದರು. ಈಗ ವಾರ ಪತ್ರಿಕೆಯೊಂದಕ್ಕೆ ಅವರು ಗೌರವ ಸಂಪಾದಕರು.
ವಾರ ಪತ್ರಿಕೆಗಳ ವಾರ್ ಆರಂಭವಾಗುತ್ತಿರುವ ಸೂಚನೆ ಕಂಡುಬರುತ್ತಿದ್ದು, ಓದುಗರು ಸತತ ಬದಲಾವಣೆಯನ್ನು ಕಾಣುತ್ತಿದ್ದಾರೆ. ಇದೇ ವೇಳೆ ಇಂದ್ರಜಿತ್ ಲಂಕೇಶರ ಲಂಕೇಶ್ ಪತ್ರಿಕೆಯನ್ನು ನಂದಿ ಕಾರಿಡಾರನ ಅಶೋಕ್ ಖೇಣಿ ಖರೀದಿಸಲಿದ್ದಾರೆಂಬ ಸುದ್ದಿಯಿದೆ. ಇರುವ ಟ್ಯಾಬ್ಲಾಯ್ಡ್ ಗಳಲ್ಲಿ ಅತ್ಯಂತ ಹಳೆಯ ವಿಕ್ರಮ ಈಗಾಗಲೇ ಹೊಸ ಸಂಪಾದಕ ಸುಧೀಂದ್ರ ಕಂಚಿತೋಟ ನೇತೃತ್ವದಲ್ಲಿ ಹೊಸ ಖದರನ್ನು ಪಡೆದುಕೊಂಡಿದೆ.
ವಿಧಾನ ಸೌಧದಲ್ಲಿ ಬಾಂಬ್ ಇಟ್ಟು ಭಯೋತ್ಪಾದನೆಯ ವಿರುದ್ಧ ಹೋರಾಟದಿಂದ ಸುದ್ದಿ ಮಾಡಿದ ಮಾಜಿ ಪೊಲೀಸ್ ಅದಿಕಾರಿ ಗಿರೀಶ್ ಮಟ್ಟಣ್ಣವರ್ ಈಗ ಗರ್ವದಲ್ಲಿ ಎನ್-ಕೌಂಟರ್ ಅಂಕಣ ಬರೆಯುತ್ತಿದ್ದಾರೆ. ಹೊಸ ಗರ್ವದ ಹಿಂದಿರುವ ಮುಖ್ಯ ಕೈ ಅವರದೆ ಎಂದು ಹೇಳಲಾಗುತ್ತಿದೆ. ಮೊದಲು ಹೇಳುತ್ತಿದ್ದುದನ್ನೇ ಇನ್ನೂ ಜೋರಾಗಿ ಕೂಗಿ ಹೇಳುವ ಉದ್ದೇಶವಿದೆ ಎಂದು ಗರ್ವದ ಸಂಪಾದಕೀಯ ಸೂಚಿಸಿದೆ. ಗರ್ವ ತನ್ನ ಸದಭಿರುಚಿಯನ್ನು ಉಳಿಸಿಕೊಳ್ಳುತ್ತಿದೆಯೇ ಅಲ್ಲ ಹಳದಿ ಬಣ್ಣಕ್ಕೆ ತಿರುಗುತ್ತದೆಯೇ ಕಾಡು ನೋಡಬೇಕಿದೆ.
ಮಾಜಿ ಭೂಗತ ದೊರೆಯ ಗನ್(ಅಲ್ಲ ಪೆನ್) ಮತ್ತು ಮಾಜಿ ಪೋಲಿಸ್ ಅಧಿಕಾರಿಯ ಎನ್ಕೌಂಟರ್ -ಗರ್ವ ಸ್ವಾಭಿಮಾನವೋ ಅಲ್ಲ ಅಹಂಕಾರವೋ ಅರ್ಥವಾಗುತ್ತಿಲ್ಲ. ನಾರಾಯಣ ನಾರಾಯಣ!

Tuesday, February 6, 2007

Sunday, February 4, 2007

ಶಿಲ್ಪಾ ಮಾನ 'ಭಾರೀ ಮೊತ್ತ'ಕ್ಕೆ ಹರಾಜು!

ಬಿಗ್ ಬ್ರದರ್ 'ರಿಯಾಲಿಟೀ ಶೋ'ದಲ್ಲಿ ಶಿಲ್ಪಾ ಮಾನ ಹರಾಜಾಗಿರುವುದು ಈಗ ಭೂಲೋಕದಲ್ಲೆಲ್ಲ ಸುದ್ದಿ.
ಅದೆಲ್ಲಾ ಸರಿ, ನಮ್ಮ ಮಾನವನ್ನೂ ಹರಾಜು ಹಾಕಿ ಎಂದು ಅಪ್ಸರೆಯರಿಂದ ಮೊದಲ್ಗೊಂಡು ಎಲ್ಲರೂ ನನಗೆ ದುಂಬಾಲು ಬೀಳುತ್ತಿದ್ದಾರಲ್ಲ, ನಾರಾಯಣ ನಾರಾಯಣ!
ನಿನ್ನೆ ದೇವಲೋಕಕ್ಕೆ ಹೋಗಿದ್ದೆ. ಶಿಲ್ಪಾ ಮಾನ ಹರಾಜಾದ ಸುದ್ದಿ ಅಲ್ಲೆಲ್ಲ ಹೇಳಿ ಭಾರತೀಯರಿಗೆ ಭೂಲೋಕದಲ್ಲಿ ಬಂದಿರುವ ದುರ್ಗತಿಯ ಬಗ್ಗೆ ವಿವರಿಸಬೇಕೆಂದುಕೊಂಡಿದ್ದೆ. ಆದರೆ ಈಗೀಗ ನಾನು ಹೋದ ಕೂಡಲೇ ಸುದ್ದಿಗಾಗಿ ನನ್ನನ್ನು ಸುತ್ತುವರೆಯುವ ಕುತೂಹಲಿಗಳೇ ಇಲ್ಲವಲ್ಲ, ಇವರಿಗೆ ಭೂಲೋಕದ ವಿದ್ಯಮಾನದ ಬಗ್ಗೆ ಆಸಕ್ತಿಯೇ ಕಡಿಮೆಯಾಗಿದೆಯಲ್ಲ ಎಂದು ಕೊಳ್ಳುತ್ತಿದ್ದಂತೆಯೇ ಬಂದ ಊರ್ವಶಿ, "ನಾನೂ ಬೈಸಿಕೊಳ್ಳಲು ತಯಾರಿದ್ದೇನೆ. ಅಷ್ಟೊಂದು ಹಣ ಸಿಗುವುದಾದರೆ ಎಷ್ಟು ಬೇಕಾದರೂ ಬೈಯಲಿ" ಎಂದು ಮಾತನಾಡಲು ಆರಂಭಿಸಿದಳು.
ನಾರಾಯಣ ನಾರಾಯಣ! ನನಗೇನೂ ಅರ್ಥವಾಗುತ್ತಿಲ್ಲವಲ್ಲ! ಬೈದರೆ ಹಣ ಸುಗುತ್ತದೆಯೇ? ಆ ರೀತಿಯ ಶಕುನ ಯಾವ ಪಂಚಾಂಗದಲ್ಲಿದೆ ಎಂದು ಕೇಳಿದೆ. ತ್ರಿಲೋಕ ಸಂಚಾರಿಗಳಿಗೆ ನಾನು ಹೇಳಬೇಕೆ? ಶಿಲ್ಪಾ ಶೆಟ್ಟಿಯ ಮಾನ ಭಾರೀ ಮೊತ್ತಕ್ಕೆ ಹರಾಜಾಗಿದೆ ಎಂದು ಭೂಲೋಕ ಟೈಂಸ್ ವರದಿಮಾಡಿದೆ ಎಂದಳು. ನಾರಾಯಣ ನಾರಾಯಣ! ಭೂಲೋಕ ಟೈಂಸ್ ಈಗ ದೇವಲೋಕದಲ್ಲೂ ಸಿಗತ್ತಾ? ಅಚ್ಚರಿಯಿಂದ ಕೇಳಿದಾಗ, ಇಂಟರ್ನೆಟ್ಟಿನಲ್ಲಿ ಬರುತ್ತದೆ ಎಂದಳು. ನನಗಿಂತಲೂ ವೇಗವಾಗಿ ಬರುವ ಎಂಟರ್ನೆಟ್ಟು ಯಾರು ಎಂದು ಕೇಳಿದೆ. ಅದಕ್ಕೆ ಕಂಪ್ಯೂಟರ್, ನೆಟ್ವರ್ಕ್, ವೆಬ್ ಸೈಟು... ಹೀಗೆ ಏನೇನೋ ವಿವರಿಸ ಹೊರಟಳು. ನನಗೇನೂ ಅರ್ಥವಾಗಲಿಲ್ಲ.
ಅದಿರಲಿ, ಶಿಲ್ಪಾ ಮಾನ ಹರಾಜಾಗಿರುವುದು ಎಂದರೆ ಅವಳಿಗೆ ಅವಮಾನವಾಗಿದೆ ಎಂದು ಅರ್ಥ. ಅವಳಿಗೆ ಹಣ ಸಿಕ್ಕಿದೆ ಎಂದಲ್ಲ ಅಂತ ವಿವರಿಸಿದೆ. ಅದಕ್ಕೆ ಅವಳು, "ನಿಮಗೆ ತಿಳಿದಿಲ್ಲವೇ ನಾರದ ಮಹರ್ಷಿಗಳೇ? ಶಿಲ್ಪಾ ಮಾನ ಹರಾಜಾದ ಬಳಿಕ ಆಕೆಗೆ ಭಾರೀ ಜಾಹೀರಾತಿನ, ಸಂದರ್ಶನದ ಅವಕಾಶ ಬರುತ್ತಿದೆಯಂತೆ... ಒಂದು ಸುದ್ದಿಯ ಪ್ರಕಾರ ಮಾನಕ್ಕೆ ಬದಲಾದಿ ಆಕೆ ಪಡೆಯುತ್ತಿರುವುದು ಬರೋಬ್ಬರಿ ೮೭ ಕೋಟಿ!... ಬ್ರಿಟಿಶ್ ಪ್ರಧಾನಿ ಜೊತೆಗೆ ಊಟ ಸಿಗುತ್ತಂತೆ... ನಾನೂ ಬಿಗ್ ಬ್ರದರ್ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು. ಬೇಕಾದರೆ ಪೂರ್ತಿ ದೇವಲೋಕದವರನ್ನೂ, ದೈವ ಜನಾಂಗವನ್ನೂ ಬೈಯಲಿ. ಪರವಾಗಿಲ್ಲ" ಎಂದು ಶುರುಹಚ್ಚಿಕೋಡಳು.
ಅಲ್ಲಿಂದ ಕೂಡಲೇ ಮಾಯವಾದ ನಾನು ನೇರ ಇಂಗ್ಲೆಂಡಿಗೆ ಹೋಗುತ್ತಿದ್ದೇನೆ. ನನ್ನನ್ನೂ ಯಾರಾದರೂ ನಿಂದಿಸುತ್ತಾರೋ ನೋಡೋಣ. ನಿಂದಕರಿರಬೇಕಿರಬೇಕು...